ಕಾಮಾಲೆ ಹಕ್ಕಿ

ಪಕ್ಷಿವರ್ಗದ ಪ್ಯಾಸೆರಿಫಾರ್ಮೀಸ್ó ಗಣದ ಓರಿಯೋಲಿಡೀ ಕುಟುಂಬಕ್ಕೆ ಸೇರಿದ ಚೆಲುವಾದ ಹಕ್ಕಿ (ಗೋಲ್ಡನ್ ಓರಿಯೋಲ್) ಶಾಸ್ತ್ರಿಯ ನಾಮ ಓರಿಯೋಲಸ್. ಹೊಳೆಯುವ ಹೊನ್ನಿನ ಮೈಬಣ್ಣ, ಕಪ್ಪನೆಯ ಬಾಲ ಹಾಗೂ ರೆಕ್ಕೆಗಳು ಮತ್ತು ಕಣ್ಣಿನ ಆಚೀಚೆ ಇರುವ ಕಪ್ಪುಬಣ್ಣದ ಪಟ್ಟಿ-ಇವುಗಳಿಂದಾಗಿ ಹೊನ್ನಕ್ಕಿ ಬಲು ಸುಂದರವಾಗಿ ಕಾಣುತ್ತದೆ. ಹೆಣ್ಣು ಹಕ್ಕಿಯ ಬಣ್ಣ ಹಸಿರುಮಿಶ್ರಿತ; ನೋಡಲು ಗಂಡಿನಷ್ಟು ಚೆಲುವಾಗಿಲ್ಲ. ಹೊನ್ನಕ್ಕಿಯ ವಾಸ ತೋಟಗಳಲ್ಲಿ ಮತ್ತು ಕಾಡುಗಳಲ್ಲಿ. ಇದರ ಆಹಾರ ಮುಖ್ಯವಾಗಿ ಕೀಟಗಳು ಮತ್ತು ವಿವಿಧ ಬಗೆಯ ಹಣ್ಣುಗಳು. ಹೂವಿನ ಮಕರಂದವನ್ನೂ ಕುಡಿಯುತ್ತದೆ. ಸಾಮಾನ್ಯವಾಗಿ ಒಂಟಿಯಾಗಿಯೋ ಜೋಡಿಯಾಗಿಯೋ ಇರುವುದಾದರೂ ಆಸ್ಟ್ರೇಲಿಯದಲ್ಲಿನ ಕೆಲವು ಬಗೆಯವು ದೊಡ್ಡ ಗುಂಪುಗಳಲ್ಲಿರುವುದುಂಟು. ಪುಕ್ಕಲು ಸ್ವಭಾವದ್ದಾದರೂ ಸದಾ ಚಟುವಟಿಕೆಯಿಂದಿರುವ ಹಕ್ಕಿಯದು. ಹೊನ್ನಕ್ಕಿಗೆ ಮಧುರವಾದ ಕೊಳಲುಲಿಯಂಥ ಸ್ವರ ಇದೆ. ಬೆಳಗ್ಗೆ ಮತ್ತು ಸಂಜೆ ಹಾಡುತ್ತ ಕಾಲಕಳೆಯುತ್ತದೆ. ಕಾಮಲೆ ಹಕ್ಕಿಯನ್ನು ಹೊನ್ನ ಹಕ್ಕಿ ಎಂದು ಕರೆಯುತ್ತಾರೆ.

ಏಪ್ರಿಲ್-ಮೇ ತಿಂಗಳ ಅವಧಿಯಲ್ಲಿ ಇವು ಗೂಡು ಕಟ್ಟುತ್ತವೆ. ಹುಲ್ಲು, ನಾರು ಮತ್ತು ಜೇಡನ ಬಲೆಯ ಎಳೆಗಳನ್ನುಪಯೋಗಿಸಿ ಬಟ್ಟಲಿನಾಕಾರದ ಗೂಡುಗಳನ್ನು ಕಟ್ಟಿ ಮರದ ಕೊಂಬೆಗಳಿಗೆ ಜೋಲಿಯಂತೆ ತೂಗು ಹಾಕುವುದು ಈ ಹಕ್ಕಿಯ ವಿಶೇಷತೆ. ಮೊಟ್ಟೆಗಳ ಸಂಖ್ಯೆ 2-3. ಗಂಡುಹೆಣ್ಣುಗಳೆರಡೂ ಕಾವುಕೊಟ್ಟು ಮರಿಮಾಡುತ್ತವಲ್ಲದೆ ಮರಿಗಳ ಪಾಲನೆಯನ್ನೂ ಮಾಡುತ್ತವೆ.

ಹೊನ್ನಕ್ಕಿ, ಭಾರತದ ಮೈದಾನ ಪ್ರದೇಶಗಳ ಕಾಡುಗಳು, ಹಿಮಾಲಯದ 5000' ಎತ್ತರದ ಪ್ರದೇಶಗಳು, ಸಿಂಹಳ, ಯೂರೋಪುಗಳಲ್ಲೆಲ್ಲ ವ್ಯಾಪಿಸಿದೆ. ವಲಸೆಗಾರ ಹಕ್ಕಿಯಾದ ಇದು ಬೇಸಗೆಯಲ್ಲಿ ರಷ್ಯದ ಇರ್ಕುತ್ಸ್ಕ್ ವರೆಗೂ ಚಳಿಗಾಲದಲ್ಲಿ ದಕ್ಷಿಣ ಆಫ್ರಿಕದ ವರೆಗೂ ವಲಸೆ ಹೋಗುತ್ತದೆ. ಭಾರತದಲ್ಲಿ ಓರಿಯೋಲಸ್ ಇರಿಯೋಲಸ್ ಕುಂದು ಎಂಬ ಒಂದು ಬಗೆಯಿದೆ. ಇದು ಬೇಸಗೆಯಲ್ಲಿ ಕಾಶ್ಮೀರದ ವರೆಗೂ ಪ್ರಯಾಣಮಾಡುತ್ತದೆ.

(ವಿ.ಕೆ.ವಿ.)

 ಪಶ್ಚಿಮ ಘಟ್ಟಗಳಲ್ಲಿ ಮೂರು ಬಗೆಯ ಹೊನ್ನಕ್ಕಿಗಳು ಕಂಡುಬರುತ್ತದೆ. ಯುರೇಷಿಯಾದ ಹೊನ್ನಕ್ಕಿ (ಓರಿಯೋಲಸ್ ಓರಿಯೋಲಸ್), ಕಪ್ಪುತಲೆ ಹೊನ್ನಕ್ಕಿ (ಓರಿಯೋಲಸ್ ಜಾóನ್‍ಥೊರ್ನಸ್), ಮತ್ತು ಕಪ್ಪು ನೆತ್ತಿಯ ಹೊನ್ನಕ್ಕಿ (ಓರಿಯೋಲಸ್ ಚೈನೆನ್ಸಿಸ್) 

         (ಪರಿಷ್ಕರಣೆ: ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ